ಹನುಮಾನ್ ಗುಂಡಿ ...ಒಮ್ಮೆ ಮಿಂದು ಬನ್ನಿ........

ಮಳೆ ಬಿದ್ದು ಮಣ್ಣು ಇನ್ನೂ ಒಣಗದ ಕಾಲದಲ್ಲಿ ಹನುಮಾನ್ ಗುಂಡಿ ಮನಸನ್ನು ಹೊಕ್ಕಿತ್ತು. ಹೆಂಗಾದರೂ ಸರಿ ಹೊರಟು ಗುಂಡಿ ನೋಡಿಬರಬೇಕು ಎಂಬ ಆಸೆ ಮೋಳಕೆಯೊಡೆಯಿತು. ಬೇಕಾದ ಸಮಾಗ್ರಿಗಳೆಲ್ಲಾ ತಯಾರಾದವು. ಕ್ಯಾಮರಾಕ್ಕೆ ಮೊದಲ ಪ್ರಾಶಸ್ತ್ಯ, ಮತ್ತೆ ಹೊಟ್ಟೆಗೆ ಗಿಟ್ಟೆಗೆ. ಮರುದಿನ ಕುದುರೆಮುಖ ದಾರಿಯಲ್ಲಿ ನನ್ನ ಬೈಕು ಎಂಬತ್ತರಲ್ಲಿ ಓಡುತಿತ್ತು. ಜೋತೆಗೊಂದಿಬ್ಬರು ಗೆಳೆಯರೂ ಅವರವರ ಬೈಕಿನಲ್ಲಿ ನನ್ನ್ ಆಸೆಯ ದಾರಿಯಲ್ಲಿ ಸಾಗತೊಡಗಿದ್ದರು. ಮೊದಲ ನಿಲುಗಡೆ ಕುದುರೆಮುಖ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ನಲ್ಲಿ. ಅಲ್ಲಿ ಬೈಕಿನ ನಂಬರ್ ತಮ್ಮ ಉಚಿತ ಪಾಸ್ನಲ್ಲಿ ಬರೆದ ಅಧಿಕಾರಿಯೊಬ್ಬರು ಖುಷಿಗೊಂದಿಷ್ಟು ಎಂದರು... ಸರಿ ಬರುವಾಗ ಪಾಸ್ ಹಿಂತಿರುಗಿಸುತ್ತೇನೆ ಎಂದೆ. ಅವರು ಸುಮ್ಮನೆ ನಕ್ಕರು. ಹಾವಿನ ದಾರಿಯಲ್ಲಿ ಕುದುರೆಮುಖ ಅರಣ್ಯದ ಮಳೆಗಾಳದ ಸೌಂದರ್ಯವನ್ನು ಅನುಭವಿಸುವುದೇ ಸ್ವರ್ಗ. ಓಪನ್ ಎ.ಸಿ. ಯಲ್ಲಿ ಕುಂತಂತ್ತಿತ್ತು ಆ ಪ್ರಯಾಣ. ನಿಧಾನವಾಗಿ ಚಲಿಸಿ , ಹಾರ್ನ ಹಾಕಬೇಡಿ, ಪ್ಲ್ಯಾಸ್ಟಿಕ್ ಎಸೆಯಬೇಡಿ, ಕಾಡು ಪ್ರಾಣಿಗಳಿಗೆ ತೊಂದರೆ ನೀಡಬೇಡಿ ಎಂಬ ಸೂಚನೆಗಳು ದಾರಿಯುದ್ದಕ್ಕೂ ಕಾಣಿಸಿಕೊಂಡವು. ಕಾಡಿನ ಒಳಗೆ ಕಿವಿಗಚ್ಚುವಷ್ಟು ಜೀರುಂಡೆಯ ದನಿ. ಅಲ್ಲಿಗೆ ತಲುಪಿತ್ತು ಎಸ್. ಕೆ ಬಾರ್ಡರ್, ಅಲ್ಲಿಂದ ಎಡಕ್ಕೆ ಶೃಂಗೇರಿ ಮುಂದೆ ಹೊಸನಾಡು ಎಂದು ಸೂಚನೆಯಿತ್ತು. ದಾರಿ ಗೋತ್ತಿದ್ದ ಕಾರಣ ಹೊಸನಾಡು ದಾರಿ ಹಿಡಿದೆವು. ಎಸ್. ಕೆ ಬಾರ್ಡರ್ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಹೆದ್ದಾರಿ ಪಕ್ಕದಲ್ಲೇ ಗುಂಡಿಗೆ ದಾರಿಯಿದೆಯೆಂದು ನೆಟ್ನಿಂದ ತಿಳಿದುಕೊಂಡಿದ್ದೆವು.


ಪ್ರಯಾಣ ಆ 5 ಕಿ. ಮೀ ಯನ್ನೇ ಕಾಯುತ್ತಿತ್ತು. ಸುಮಾರು 7 ಗಂಟೆಗೆ ಮನೆಯಿಂದ ಹೊರಟ ಪ್ರಯಾಣ ಹನುಮಾನ್ ಗುಂಡಿ ತಲುಪುವಾಗ 11 ಗಂಟೆ. ಬೈಕನ್ನು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದೆವು. ಆಗಲೇ ಹಲವರ ಆಗಮನ ಆ ಸ್ಥಳಕ್ಕೆ ಬಂದಿತ್ತು. 20 ರುಪಾಯಿಯ ಪ್ರವೇಶ ಪತ್ರವನ್ನು ಪಡೆದು ಕಬ್ಬಿಣದ ಮೆಟ್ಟಲುಗಳನ್ನು ಇಳಿಯತೊಡಗಿದೆವು. ಸುಮಾರು 80 ಡಿಗ್ರಿಯ ಇಳಿಜಾರದು. ಜಲಪಾತದ ನೀರಿನ ದನಿ ಆಗಲೇ ಕಿವಿಗೆ ಬೀಳುತಿತ್ತು. ಜಲಪಾತದ ಹತ್ತಿರಕ್ಕೇ ದಾರಿ ಸಾಗಿತು. ಗಾಳಿಯ ತುಂಬೆಲ್ಲಾ ಹನಿ ನೀರಿನ ತಂಪು. ಜಲಪಾತ ಕಂಡೊಡನೆ ಗೆಳೆಯರಿಬ್ಬರಿಗೂ ಸ್ನಾನದ ನೆನಪಾಯಿತು. ಇಬ್ಬರೂ ನೀರಗಿಳಿದರು, ಕೋನೆಯದಾಗಿ ನಾನೂ ಸೇರಿಕೊಂಡೆ. ಫ್ರಿಜ್ ನೀರಿಲ್ಲಿ ಸ್ನಾನ ಮಾಡಿದವನುಭವವದು. ಮೈಕೈಯೆಲ್ಲಾ ಕೆಲವು ಕ್ಷಣಗಳ ಕಾಲ ಇದೆಯೋ ಇಲ್ಲವೋ ಎನ್ನುವ ಪರಿಸ್ಥಿತಿಯನ್ನು ಹೊಂದಿದ್ದವು. ಆದರೂ ಆಸೆ ಸಾಕಾರಗೊಂಡ ಕ್ಷಣವದು.
No comments:
Post a Comment