Monday, April 30, 2012


                       ಮೊದಲ ಪತ್ರ ಗೀಚಿದೆ
 ಅಂದು ಸೀತಾರಾಮ ವಾನಳ್ಳಿ ಮಾಸ್ಟ್ರು ಪತ್ರ ಬರೆಯುವುವುದು ಹೇಗೆ ಎಂದು ಕಲಿಸಿ ಎರಡು ಮೂರು ದಿನವಾಗಿರಬೇಕು. ನನಗೆ ವರ್ಷ ಸುಮಾರು 9. ಬೇಸಿಗೆ ರಜೆ ಶುರುವಾಗಿತ್ತು. ಮನೆಯ ಜಗಲಿಯಲ್ಲಿ ಆರಾಮಾಗಿ ಆಕಾಶ ನೋಡುತ್ತಾ ಕುಳಿತಿದ್ದೆ. ಆತುರದಿಂದ ಕೆಲಸದಾಕೆ ಶಾಂತಿ ಓಡಿಬಂದಳು. ನನ್ನ ಹೆಸರು ಕೂಗಿ ,ಅಣ್ಣಾ ನನ್ನ ಸೊಸೆ ಓಡಿ ಹೋಗಿದ್ದಾಳೆ, ವಾಪಾಸು ಕರೆಯಲು ಒಂದು ಪತ್ರ ಬರಿ ಎಂದಳು. ಆಹಾ ಸಂತೋಷ ಪತ್ರ ಬರೆಯಲು ನನಗೂ ಬರುತ್ತದೆ ಎಂದು ತೋರಿಸಲು ಆತುರದಿಂದ ಕಾಗದ ಮತ್ತು ಪೆನ್ನು ತಂದೆ. ಏನು ಬರಿಬೇಕು ಎಂದು ಕೇಳಿದೆ?
   ಆಕೆಯ ಕತೆ ಶುರುವಾಯಿತು ನೋಡಿ. " ಲೇ ನಾ ಸುಮ್ನೆ ನಿನ್ನ ಬೈದೆ. ನೀ ಅದಕ್ಕೆ ಮನೇ ಬಿಟ್ಟ್ ಹೋಗೋದಾ. ನಂಗೆ ಇನ್ನೂ ನೆಂಪಿದೆ. ನನ್ನ್ ಮಗನಿಗೆ ಒಳ್ಳೆ ಹೆಂಡ್ತಿ, ನಂಗೊಂದು ಸುಂದರಿ ಸೊಸೆ ಬೇಕು ಅಂತ ವಾಚ್ಗದ್ದೆ ಜೋಯಿಸರಲ್ಲಿ ಕೇಳಿದಾಗ ನಮ್ಮೂರಲ್ಲೆ ಒಬ್ಬಳು ಸುಂದರಿ ಇದ್ದಾಳೆ ಮಾತಾಡೋಣ ಎಂದರು. ತುಂಬಾ ಖುಷಿ ಪಟ್ಟೆ ನಾನು. ಮನೆಗೆ ಹಿಂತಿರುಗಿ ನಮ್ಮವರಿಗೂ ತಿಳಿಸಿದೆ, ಅಲ್ಲಿಗೆ ಕಳಿಸಿದೆ. ನಾನಂತೂ ಕಾತುರದಿಂದ ನನ್ ಸೊಸೆ ಹೆಂಗಿರ್ತಾಳೆ ಅಂತ ಕನಸು ಕಾಣ್ತ್ತಿದ್ದೆ. ಎಷ್ಟು ಉದ್ದ, ಬೆಳ್ಳಗಿದ್ಯಾ, ಕಪ್ಪಗಿದ್ಯಾ, ಅಡುಗೆ ಚೆನ್ನಾಗಿ ಮಾಡ್ತಾಳಾ ಮುಂತಾದ ಯೋಚನೇಲಿ ಮಾತುಕತೆ ದಿನ ಬಂತು. ಕವಳ ಹಾಕೊಂಡು ಮಾತುಕತೆ ನಡೆಯಿತು. ಅಂದು ನಿನ್ನ ಉಡುಬಿ ಅಥರ್ಾತ್ ನನ್ನ ಮಗನ ನೋಡಿ ನಾಚಿದ್ದು ನೆನಪಿದ್ಯಾ?.  ನಿಶ್ಚಯವಾಯಿತು ಮದುವೆ. ಗಡಿಬಿಡಿಯಲ್ಲಿ ನಡೆಯಿತು ನಿಶ್ಚಿತಾರ್ಥ. ಆಗ ನನಗಾದ ಖುಷಿ ಹೇಳತೀರದು.ಮದುವೆ ಅದ್ದೂರಿಯಲ್ಲಿ ಮಾಡಿದೆವು. ಮನಗೆ ಹೊಸ ಸೊಸೆ, ಹೊಸ್ತಿಲಲ್ಲೊಂದು ಅಕ್ಕಿ ಸೇರು, ದೇವರ ಕೋಣೆಯಲ್ಲೆರಡು ಕೈಯಚ್ಚು,, ಮನೆಯ ತುಂಬಾ ಗೆಜ್ಜೆ ಸದ್ದು . ಮದುವೆ ನಡೆದು ಮೂರು ದಿನದಲ್ಲಿ ನಾವು ಕೊಲ್ಲೂರು ದೇವಸ್ತಾನಕ್ಕೆ ಹೋಗಿದ್ದು, ಗಮಯನ ಗುಡ್ಡಕ್ಕೆ ಚಾರಣ ಹೋಗಿದ್ದು, ಜೋಗದ ನೀರಲ್ಲಿ ಆಟವಾಡಿದ್ದು ನೆನಪಿಲ್ವೇ?. ದಾರಿ ಅಡ್ಡ ಕಟ್ಟಿ , ಗಂಡನ ಹೆಸರು ನಿನ್ನಲ್ಲಿ ಹೇಳಿಸಿ ಮನೆಗೆ ಬರಮಾಡಿಕೊಂಡ್ವಿ. ತುಂಬಾ ಚೆನ್ನಾಗಿ ಅಡುಗೆ ಮಾಡ್ದೆ. ನಂಗೂ ನಿಮ್ಮಾವಂಗೂ ಸಂತೋಷ ಆಯ್ತು. ಆ ದಿನ ನಾ ನಿಂಗೆ ಸುಮ್ನೆ ಬೇಗ ಅಡುಗೆ ಮಾಡು ಕೆಲ್ಸದವ್ರು ಇದ್ದಾರೆ ಎಂದು ಬೈದೆ. ಅಷ್ಟಕ್ಕೇ ನೀ ಮನೆ ಬಿಟ್ಟೇ ಹೋಗೋದ. ನಂಗೆ ತುಂಬಾ ಬೇಜಾರ್ ಆಯ್ತು ಗೊತ್ತಾ?. ನಿಮ್ಮಾವ ನಂಗೆ  ಬೈದ್ರು. ಆಪುಟ್ಟ ಸೊಸೆನ ಯಾಕ್ ಹಂಗೆ ಬೈದಿ ಅಂತ ನನ್ನ ಗದರಿಸಿದ್ರು. ..ತಪ್ಪಾಯ್ತೆ ಮನೆಗೆ ಬೇಗ ಬಾರೆ."
   ಇದನ್ನ ಬೇಗ ಕಳಿಸಿ ಎಂದಳು ಶಾಂತಿ. ಅಂದವಾಗಿ ಬರೆದಿದ್ದೆ ಪತ್ರವನ್ನ. ಅಕ್ಷರ ತಪ್ಪೇನಾದ್ರು ಇದ್ಯಾ ಅಂತ ನೋಡಿದೆ. ಇಲ್ಲ ಅಂತ ತಿಳಿದ ಮೇಲೆ ಶಾಂತಿ ಹತ್ರ ಸೊಸೆ ವಿಳಾಸ ಕೇಳಿದೆ. " ನಂಗೇನು ಗೊತ್ತು ಸ್ವಾಮಿ , ಮನೆ ಬಿಟ್ಟು ಹೋಗಿದ್ದು ಆಕೆ. ಬೇಗ ಪೋಸ್ಟ್ ಡಬ್ಬಿಗೆ ಹಾಕಿ ಎಂದು ಕನಿಕರದಲ್ಲಿ ಕೇಳಿದಳು ಶಾಂತಿ. ನೋಡಿ ನನ್ ಪರಿಸ್ಥಿತಿ ಅಡ್ರೆಸ್ ಇಲ್ಲದೆ ನನ್ನ ಜೀವನದ ಮೊದಲ ಪತ್ರವನ್ನು ಗೀಚಿದ್ದೆ.

No comments:

Post a Comment